ಯಾರ ಹಣ್ಣಿನ ಆಸೆಗೋ , ಅವರದೇ ಉಳಿದ ವಾಸನೆಗೋ
ಜೊತೆಗೆ ಬೆಳೆದಿವೆ
ಮರಕೆ ಬಳ್ಳಿಯೋ ಬಳ್ಳಿಗೆ ಮರವೋ
ತಿಳಿಯದಾಗಿದೆ .... ಬಿಗಿಯಲಾಗಿದೆ ದಾರ
ತನ್ನ ಕರುಳಿನ ಬೇರಿಗೋ , ಹೂ ಚಿಟ್ಟೆ, ಮೊಟ್ಟೆ , ಹಾವಿಗೋ
ಜೊತೆ ಜೊತೆಗೆ ಬೆಳೆಯುತಿವೆ
ಮರಕೆ ಬಳ್ಳಿಯೋ ಬಳ್ಳಿಗೆ ಮರವೋ
ತಿಳಿಯದಾಗಿದೆ .... ಸಡಿಲಾಗುತಿದೆ ದಾರ
ಬಾರದ ಮಳೆಯ ಬರಕೋ , ಬೀಸಿದ ಗಾಳಿಯ ರಭಸಕೋ
ಜೊತೆ ಜೊತೆಗೆ ಬೇಯುತಿವೆ
ಮರಕೆ ಬಳ್ಳಿಯೋ ಬಳ್ಳಿಗೆ ಮರವೋ
ತಿಳಿಯದಾಗಿದೆ .... ಸಡಿಲಾಗಿದೆ ದಾರ
ಹೊರದ ತನ್ನ ಭಾರಕೊ , ಮರಳಿದ ಬಳ್ಳಿಯ ಬೇಸರಕೋ
ಜೊತೆ ಜೊತೆಗೆ ಕೊರಗುತಿವೆ
ಮರದಿಂದ ಬಳ್ಳಿಯೋ ಬಳ್ಳಿಯಿಂದ ಮರವೋ
ತಿಳಿಯದಾಗಿದೆ .... ಹರಿದುಹೋಗಿದೆ ದಾರ
ತಾಳದೆ ತಪ್ಪಿದ ಬಳ್ಳಿಯ ತಾಳಕೋ ,ಹಾಡದೆ ಬಿದ್ದ ಮರದ ಸ್ವರಕೋ
ಜೊತೆ ಜೊತೆಗೆ ಬೀಳುತಿವೆ
ಮರದಿಂದ ಬಳ್ಳಿಯೋ ಬಳ್ಳಿಯಿಂದ ಮರವೋ
ತಿಳಿಯದಾಗಿದೆ .... ಬಿದ್ದು ಹೋಗಲಿದೆ ಮರ .
ಬಿದ್ದು ಒಡೆದಿತೇ ಬಳ್ಳಿಯ ಹಣ್ಣಾಗದ ಕಾಯಿ ?
ಬೇಡ .. ಬೇಡ ... ಬೇಡ
ಮರ ಬೀಳಲಿ .. .... ಚಿಟ್ಟೆ ಹಾರಲಿ , ಹಕ್ಕಿ ಹಾರಲಿ , ಹಾವು ಸಾಯಲಿ
ಮಳೆ ಸುರಿಯಲಿ ... ಬೇರು ಗೊಬ್ಬರವಾಗಲಿ, ಬಳ್ಳಿ ಬೆಳೆಯಲಿ , ಕಾಯಿ ಹಣ್ಣಾಗಲಿ
ಇಳೆಯ ಸೂರಿನಲಿ , ಬೆಳೆದ ನಾಯಿ ಕೊಡೆಯಡಿಯಲಿ , ಮರದ ಕಣ್ಣೀರಿಗೆ ಗೋರಿಯಿರಲಿ