Sunday, November 01, 2020
Thursday, October 29, 2020
ಕೊಳಲು
ಉಸಿರಾಡುತಿಹುದು ಮನೆ ಹೊಗೆಕೋಳವೆಯಿಂದ
ತಿಳಿ ನೀಲಿ ಮೂಡಣ
ಕಡು ಹಸಿರ ಕಾಡ ತೋರಣ
ನಸು ಕೆಂಪ ಮಾಡಿನ ಮೂಡಲ ಮನೆ
ಮೇಲೆ ಕರಿಯ ಕಪ್ಪು ಕೊಳವೆ
ಉಸಿರಾಡುತಿಹುದು ಮನೆ
ಅದೇ ಹೊಗೆಯ ಕೋಳವೆಯಿಂದ
ಕೆಂಪು ದೊಡ್ಡ ಬೊಟ್ಟಿನ ಅಜ್ಜಿ
ಹಳದಿ ಉಬ್ಬು ಹಲ್ಲಿನ ಅಜ್ಜ
ಕಂದು ಕಣ್ಣಿನ ಚೆಂದದ ಅಮ್ಮ
ಗೋದಿ ಬಣ್ಣದ ಅಸಾಧಾರಣ ಅಪ್ಪ
ಅಡ್ಡಾಡುತಿರುವ ಮನೆ
ಎಲ್ಲರನು ಸಲುಹುತಿದೆ ಅದೇ ಹೊಗೆ ಕೊಳವೆ
ಕದವಿದ್ದರೂ ಅಳಲಿಲ್ಲ ಆ ಕೋಣೆಯಲ್ಲಿ
ಅಮ್ಮ ಅತ್ತದ್ದು ಕದವಿರದ ಈ ಕೋಣೆಯಲ್ಲಿ
ಕಣ್ಣೇರಿನ ಅಪವಾದ ಹೊಗೆಗೆ ಕೊನೆಯಲ್ಲಿ
ಅಳದ ಅಪ್ಪನ ಮನದ ಹೊರೆಗೆ ಕೊನೆಯೆಲ್ಲಿ ?
ಹೊಡೆದಾಟವಿರುವ ಮನೆ
ಎಲ್ಲವನು ಸಹಿಸುತಿದೆ ಅದೇ ಹೊಗೆ ಕೊಳವೆ
ದಿನ ಶುರುವಾಗುವುದು ಅಪ್ಪನ ಬಿಸಿನೀರಿನಿಂದ
ದಿನ ಮುಗಿಯುವುದು ಅಮ್ಮ ಕಾಸಿದರೆ ಹಾಲು
ನಡುವೆ ಸಮಯವಿರೆ ಬೆಂಕಿ ಗೋಡಂಬಿ ಬೀಜಕೆ
ಇರುಳಿನಲಿ ಕೆಂಡ ನೀಡಿದೆ ಅಜ್ಜನ ಕದ್ದ ಬೀಡಿಗೇ
ದಿನವಿಡಿ ನಡೆಯುತಿದೇ ಮನೆ
ಹಾಗೇ ದುಡಿಯುತಿದೆ ಇದೆ ಹೊಗೆ ಕೊಳವೆ
ಅಕ್ಕ ಉಕ್ಕಿಸಿದಳಂತೆ ಹಾಲು ಮೈಯ ಮರೆತು
ಸುಳ್ಳು, ಕಂಡೆ ಕೊಳವೆ ಮೇಲೆ ಭಾವನ ಕೈಯ ಗುರುತು
ಬಣ್ಣ ಇಲ್ಲ ಬೇರೆ ಅವಳ ಬೆನ್ನ ಮೇಲೆ ಮಸಿಯ ಹೊರತು
ತಿಂಗಳೊಂಬತ್ತರಲಿ ಹೆತ್ತಾಗ, ತಿಳಿದಿದ್ದು ಕಾಮಕ್ಕಾವ ಋತು
ಕಣ್ಣುಮುಚ್ಚಾಟವಿರುವ ಮನೆ
ಕಂಡದ್ದಕ್ಕೂ ಕುರುಡಾಗಿದೆ ಇದೆ ಹೊಗೆ ಕೊಳವೆ
ಅಣ್ಣ, ಅಕ್ಕ ಅವಳ ಬೆನ್ನಿಗೆ ನಾ ಇಲ್ಲೇ ಬೆಳೆದದ್ದು
ಅವನ ಮಗಳು, ಅವಳ ಮಗ ಇಲ್ಲೇ ಹುಟ್ಟಿದ್ದು
ಅವರಿಗೆ ಅಪ್ಪನ ಬಿಸಿಯ ನೀರು, ಅಮ್ಮನ ಎಣ್ಣೆ ಬಟ್ಟಲು
ಎಲ್ಲರನ್ನೂ ಬತ್ತಲಲ್ಲಿ ನೋಡಿದ್ದು ಅದೇ ಬಚ್ಚಲು
ಮೂರೂ ತಲೆಮಾರಿನ ಮನೆ
ವರುಷ ನೂರದರೂ ಹಾಗೆ ಇದೆ ಹೊಗೆ ಕೊಳವೆ
ಇರುಳಲಿ ಕಂಡ ಅಜ್ಜಿ ಮುಂಜಾವಲಿ ಇರಲಿಲ್ಲ
ನೆರಮನೆಯಿಂದಲೇ ಊಟ ತಿಂಡಿ ಮನೆಯಲ್ಲಲ್ಲ
ಅದೊಂದೇ ದಿನ ನಾವೂ ಯಾರೂ ಮೀಯಲಿಲ್ಲ
ಹೊಗೆ ಇಲ್ಲದೆ ಅಂದು ಕೊಳವೆ ಅಂದು ಉಸಿರಾಡಲಿಲ್ಲ
ಹುಟ್ಟಿನ ಜಾತಕ ಸಾವಿನ ಸೂತಕ
ಕಾಲವನ್ನೆಲ್ಲ ಕಂಡರೂ ಹಾಗೆ ಇದೆ ಹೊಗೆ ಕೊಳವೆ
ದಿನವೂ ದುಡಿದರೂ ವರುಷ ನೂರದರೂ
ಪರಗೆ ಬಿಸಿನೀರ ನೀಡಿ, ತಾ ಮಳೆಯಲಿ ಮಿಂದರೂ
ಮನೆಗೆ ಸುಣ್ಣ ಬಣ್ಣವಾದರೂ, ತನಗೆ ಹೊಗೆಯೇ ಗತಿಯಾದರೂ
ಎಲ್ಲರನೂ ಸಲುಹಿ, ಸಹಿಸಿ, ಬೆಳೆಸಿ ನಡೆಸಿದರೂ
ಹಾಗೆ ಇದೆ ಹೊಗೆ ಕೊಳವೆ
ಹಾಗೆ ಇದೆ ಹೊಗೆ ಕೊಳವೆ
ನೀನು ಮನೆಯ ಮೂಗು, ಹೊಗೆಯೇ ನಿನ್ನ ಉಸಿರು
ಕೊಳವೆಯಲ್ಲ ನೀನು ಮನೆಗೆ ನೀನು ಕೊಳಲು
ಮಾಯೆ
ಹಾರಾಡದೇ
ಕೂತು
ಹಾರಬೇಕು
ಮನೆಯಿಂದ
ಹೊರಗೆ
ಗರ್ಭದಿಂದ ಹೊರಗೆ ಬಂದ ಜೀವಿ
ಮಾತಾಡದೆ
ಕೂತು
ಹಾರಬೇಕು
ಮಾಯೆಯಿಂದ
ಹೊರಗೆ
Monday, June 29, 2020
ಸಾಧಿಸಬೇಕಿಲ್ಲ
ಮರೆಯುವ ಮುನ್ನ ಬರೆದಿಡಬೇಕಿಲ್ಲ
ಹಾಡಬೇಕು
ಬಟ್ಟೆ
ಹರಿಯುವ ಮುನ್ನ ತೋರಿಸಬೇಕಿಲ್ಲ
ತೊಡಬೇಕು
ಬಣ್ಣ
ಅಳಿಯುವ ಮುನ್ನ ಹೊಳೆಯಬೇಕಿಲ್ಲ
ತೋರಬೇಕು
ಅಣ್ಣ
ಸಾಯುವ ಮುನ್ನ ಸಾಧಿಸಬೇಕಿಲ್ಲ
ಬದುಕಬೇಕು
