Saturday, August 11, 2018

ದೇವರು


ನಾನ್ಯಾರೆಂದರೆ ನಾನಲ್ಲ 

ನಾನ್  ಕಾರಣವಿರದ ಆನಂದ

ಕಣ್ಣಿಗೆ ಕಾಣದ ಕೈಗೆ ಸಿಗದ
ಮಾತಲಿ ಹೊರಡದ ಪರಿಮಳವಿರದ
ಕಿವಿಯಲಿ ಉಲಿಯದ ನಾ ..ಪಂಚೇಂದ್ರಿಯವೂ ಅಲ್ಲ
ನಾನ್ಯಾರೆಂದರೆ ನಾನಲ್ಲ 

ನಾನ್  ಕಾರಣವಿರದ ಆನಂದ

ಗಾಳಿಗೆ ಹಾರದ ಬೆಂಕಿಗೆ  ಉರಿಯದ
ನೀರಲ್ಲಿ ಕರಗದ ಬಾನಲಿ ತೇಲದ
ಮಣ್ಣಲಿ ಮಣ್ಣಾಗದ ನಾ .... ಪಂಚಭೂತವೂ  ಅಲ್ಲ
ನಾನ್ಯಾರೆಂದರೆ ನಾನಲ್ಲ

ನಾನ್  ಕಾರಣವಿರದ ಆನಂದ


 ನಾ ಅಪ್ಪನಲ್ಲ, ನನಗಮ್ಮನಿಲ್ಲ  ನಾ ಹುಟ್ಟಲೇ ಇಲ್ಲ
ನಾ ನಂಟನಲ್ಲ , ಬಂಟನಲ್ಲ ನಾನಾರಿಗೂ ಅಂಟಿಲ್ಲ
ನಾ ಗುರುವಲ್ಲ ಎನಗೆ ಗುರಿಯಿಲ್ಲ .... ನಾನರಿವೂ ಅಲ್ಲ
ನಾನ್ಯಾರೆಂದರೆ ನಾನಲ್ಲ
ನಾನ್  ಕಾರಣವಿರದ ಆನಂದ


ನಾ ಕೋಪ ತಾಪವಲ್ಲಾ ಎನಗೆ ಶಾಪವಿಲ್ಲ
 ನಾ ಕಾಳಲ್ಲ ನಾ ಕೂಳಲ್ಲ ಎನಗಹಸಿವಿಲ್ಲ
 ನಾ ಜೀವವಲ್ಲ ನಾ ಶವವಲ್ಲ ...ನನಗೆ ಸಾವೇ  ಇಲ್ಲ
ನಾನ್ಯಾರೆಂದರೆ ನಾನಲ್ಲ
ನಾನ್  ಕಾರಣವಿರದ ಆನಂದ

ಬೆರೀರದ ತುದಿಯಿಲ್ಲದ ಮರ ನಾನು
ಮೊದಲಿಲ್ಲದ ಕೊನೆಯಿಲ್ಲದ ಆಗರ ನಾನು
ಮೇಲಿಲ್ಲದ ಕೀಳಿಲ್ಲದ ಶೂನ್ಯ ನಾನು
ನಾನ್ಯಾರೆಂದರೆ ನಾನಲ್ಲ

ನಾನ್  ಕಾರಣವಿರದ ಆನಂದ





Thursday, May 10, 2018

ನೀನಾಗಿ ನೀ ಬದುಕು

ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು


ನೀರು
ಹರಿದರೆ ಹೊಳೆ
ನಿಂತರೆ ಕೆರೆ
ಬಿದ್ದರೆ ಮಳೆ
ಎದ್ದರೆ ಬುಗ್ಗೆ

ಕುಡಿದರೆ ನೀರು ಕೊಟ್ಟರೆ ತೀರ್ಥ
ನೀರಿಗೇನು ?
ತೀರ್ಥಕ್ಕಾಗಿ ನೀರಲ್ಲ , ನೀರಿಗದು ಬೇಕಿಲ್ಲ
ನೀನೂ ನೀರಾಗು ... ನೀನೇ  ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!

ಮರ
ಬೀಳಲಿದ್ದರ ಆಲ
ಬಿಳಿಯಾದರೆ ನೀಲ
ನೆರಳಿದ್ದರೆ ಹೊಂಗೆ
ಇರದಿದ್ದರರೇ ತೆಂಗು

ಬೆಳೆದರೆ ಮೇಲು ಕಡಿದರೆ ಮೇಜು
ಮರಕ್ಕೇನು ?
ನೆರಳಿಗಾಗಿ ಮರವಲ್ಲ , ನೆರಳು ಮರಕಲ್ಲ
ನೀನೂ ಮರವಾಗು .... ನೀ ಮರವಾದರೆ ನೀ ಅಮರ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


ಹಣ್ಣು
ಹುಳಿಯಾದರೆ ನಿಂಬೆ
ಒಗರಾದರೆ ಸೀಬೆ
ಸಿಹಿಯಾದರೆ ಮಾವು
ತೊಳೆಯಾದರೆ ಹಲಸು

ತಿಂದರ ಹಣ್ಣು ಬಿದ್ದರೆ ಬೀಜ
ಹಣ್ಣಿಗೇನು ?
ಯಾರೂ ತಿಂದರೂ ಹಣ್ಣು, ಬೀಜಕೆ ಬೇಕು ಮಣ್ಣು
ನೀನೂ ಹಣ್ಣಾಗು ..... ನಿನಗೆ ನೀ ಕಣ್ಣಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!



ಹಕ್ಕಿ
ಹಾಡಿದರೆ ಕೋಗಿಲೆ
ಕೂಗಿದರೆ ಕಾಗೆ
ಈಜಿದರೆ ಹಂಸ
ಹಾರಿದರೆ ಹದ್ದು

ಮೊಟ್ಟೆ ಮೊದಲೋ ಕೋಳಿ ಮೊದಲೋ
ಹಕ್ಕಿಗೇನು ?
ಬಾನಿಗಾಗಿ ಹಾರಲಿಲ್ಲ ಹಕ್ಕಿ, ಹಾರಿದ್ದು ತನಗಾಗಿ
ನೀನೂ ಹಕ್ಕಿಯಾಗು .... ಏರು ಬಾನಲ್ಲಿ ಈಜು ನೀರಲ್ಲಿ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


 ನೀ .. ಹರಿದರೆ ನೀರು ...
ನೀ ... ಹಾರಿದರೆ ಹಕ್ಕಿ ...
ನೀ ... ಮಾಗಿದರೆ ಹಣ್ಣು
ನೀ ... ಬೆಳೆದರೆ ಮರ
ನೀ ಏನಾದರೂ  ಆಗು , ನೀ ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!








Tuesday, January 30, 2018

ನಾನೀಗ

ನನ್ನತನ ಚೀರಿ ಸಾಯುವಾಗ
ಯಾರೂ ಕೇಳಲಿಲ್ಲ 
ನನಗೀಗ ಯಾರ ಕೂಗೂ
ಕೇಳುತ್ತಿಲ್ಲ 
....ನಾನೀಗ ಕಿವುಡ


ಬರಿಯದ ಲೇಖನಿಯ ಬರವಣಿಗೆಯ
ಯಾರೂ ಕಾಣಲಿಲ್ಲ
ನನಗೀಗ ಯಾವ ಕನಸೂ
ಕಾಣುತ್ತಿಲ್ಲ
....ನಾನೀಗ ಕುರುಡ


ಅನುರಣ ನನ್ನವಗುಣಗಳ
ಮಾತನಾಡಲಿಲ್ಲವೇ ಜಗ
ನನಗೀಗ  ಮೌನದೊಂದಿಗೂ
ಮತನಾಡಲಾಗುತಿಲ್ಲ 
.....ನಾನೀಗ ಮೂಗ


ಕೈ-ಕಾಲು, ಕಾರು-ಮನೆಗಳೆನ್ನ
ಬದುಕೆತಂದಿತು ಜಗ
ನನಗೀಗ ಮೂರು ಜನ್ಮವಿತ್ತರೂ
ಬದುಕಲಾರೆ 
.....ನಾನೀಗ ಜೀವಚ್ಛವ