Thursday, May 10, 2018

ನೀನಾಗಿ ನೀ ಬದುಕು

ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು


ನೀರು
ಹರಿದರೆ ಹೊಳೆ
ನಿಂತರೆ ಕೆರೆ
ಬಿದ್ದರೆ ಮಳೆ
ಎದ್ದರೆ ಬುಗ್ಗೆ

ಕುಡಿದರೆ ನೀರು ಕೊಟ್ಟರೆ ತೀರ್ಥ
ನೀರಿಗೇನು ?
ತೀರ್ಥಕ್ಕಾಗಿ ನೀರಲ್ಲ , ನೀರಿಗದು ಬೇಕಿಲ್ಲ
ನೀನೂ ನೀರಾಗು ... ನೀನೇ  ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!

ಮರ
ಬೀಳಲಿದ್ದರ ಆಲ
ಬಿಳಿಯಾದರೆ ನೀಲ
ನೆರಳಿದ್ದರೆ ಹೊಂಗೆ
ಇರದಿದ್ದರರೇ ತೆಂಗು

ಬೆಳೆದರೆ ಮೇಲು ಕಡಿದರೆ ಮೇಜು
ಮರಕ್ಕೇನು ?
ನೆರಳಿಗಾಗಿ ಮರವಲ್ಲ , ನೆರಳು ಮರಕಲ್ಲ
ನೀನೂ ಮರವಾಗು .... ನೀ ಮರವಾದರೆ ನೀ ಅಮರ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


ಹಣ್ಣು
ಹುಳಿಯಾದರೆ ನಿಂಬೆ
ಒಗರಾದರೆ ಸೀಬೆ
ಸಿಹಿಯಾದರೆ ಮಾವು
ತೊಳೆಯಾದರೆ ಹಲಸು

ತಿಂದರ ಹಣ್ಣು ಬಿದ್ದರೆ ಬೀಜ
ಹಣ್ಣಿಗೇನು ?
ಯಾರೂ ತಿಂದರೂ ಹಣ್ಣು, ಬೀಜಕೆ ಬೇಕು ಮಣ್ಣು
ನೀನೂ ಹಣ್ಣಾಗು ..... ನಿನಗೆ ನೀ ಕಣ್ಣಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!



ಹಕ್ಕಿ
ಹಾಡಿದರೆ ಕೋಗಿಲೆ
ಕೂಗಿದರೆ ಕಾಗೆ
ಈಜಿದರೆ ಹಂಸ
ಹಾರಿದರೆ ಹದ್ದು

ಮೊಟ್ಟೆ ಮೊದಲೋ ಕೋಳಿ ಮೊದಲೋ
ಹಕ್ಕಿಗೇನು ?
ಬಾನಿಗಾಗಿ ಹಾರಲಿಲ್ಲ ಹಕ್ಕಿ, ಹಾರಿದ್ದು ತನಗಾಗಿ
ನೀನೂ ಹಕ್ಕಿಯಾಗು .... ಏರು ಬಾನಲ್ಲಿ ಈಜು ನೀರಲ್ಲಿ
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!


 ನೀ .. ಹರಿದರೆ ನೀರು ...
ನೀ ... ಹಾರಿದರೆ ಹಕ್ಕಿ ...
ನೀ ... ಮಾಗಿದರೆ ಹಣ್ಣು
ನೀ ... ಬೆಳೆದರೆ ಮರ
ನೀ ಏನಾದರೂ  ಆಗು , ನೀ ನೀನಾಗು
ನೀನಾಗಿ ನೀ ಬದುಕು ..... ನಿನಗಾಗಿ ಈ ಬದುಕು !!