Sunday, October 13, 2019

ಸೋಲರಿಯದವನು

ದಾರಿ ತಪ್ಪಿದೆ
ಹಾದಿ ಕಳೆದಿದೆ
ಬಿದ್ದಿದ್ದೇನೆ ಬೀದಿಯಲ್ಲೇ
ಏನಾದರೂ ಸುಖಿಸುವ  ಆತ್ಮ ನನ್ನದು :  ದಯೆ ನಿನ್ನದು

ಬದುಕು  ತುಳಿದರೂ
ಬಾಳು ಬೋರಲಾದರೂ
ನಾ ಅತ್ತಿಲ್ಲ ಕರೆದಿಲ್ಲ
ಆಡಿಸಿ ಬೀಳಿಸಿ ಉರಳಿಸಿದರೂ : ತಲೆ ಬಾಗಲಿಲ್ಲ 

ಇಂದು ಬೇಗೆ , ಬಿದಿಗೆ
ನಾಳೆ ಕಣ್ಣಾವಿ,
ಕತ್ತಲ ಅಮವಾಸಿ
ದಿನಕರನ  ಕರಗಿಸಿ ಕತ್ತಲಾಗಿಸಿದರೂ : ನಾ  ಹೆದರದ ಅಧೀರ

ನಾಕ ಕದವ ತೆಗೆಯದೇ
ನರಕ ಮರಳಿ ಕಳಿಸದೇ
ಕರಕಲಾದರೂ
ನೀ ನೀಡಿದ ಆತ್ಮದ ನಾಯಕ ನಾ : ಬದುಕ ಚಾಲಕ ನಾ

Wednesday, May 08, 2019

ಆವಾ ಆವಿಯಾದ

ಅನ್ನವಿಲ್ಲ ಚಿನ್ನವಿಲ್ಲ ಇಲ್ಲ ಅವಗೆ ಉಡಲು ಅರಿವೆ
ಆಳಿಲ್ಲ ಅಳುವಿಲ್ಲ ಇಲ್ಲ ಅವಗೆ  ಜಗದ ಪರಿವೆ
ಆವ ಅರಸನಿಗೇನು ಕಡಿಮೆ

ತಿನಲು  ಚಿನ್ನದ  ತಟ್ಟೆ,  ಮೊಟ್ಟೆ ಬೇಕೇ ಅವನ ಆ  ಹೊಟ್ಟೆಗೆ
ಕೂರಲು ಕಲ್ಲಿನ ಕಟ್ಟೆ , ಚಟ್ನಿ ಸಾಕು ಎರಡು  ಒಣ ರೊಟ್ಟಿಗೆ
ತಿನಲು  ಅವಗೆ ಗೆಳೆಯರೊಟ್ಟಿಗೆ


ಉಪ್ಪ ನೀರನು ಹಳಿಯದೆ ಆವ ಮರಳ ಮೇಲ ನಡೆದ
ಪರರ ಸುಖವ ಬಯಸುತ  ಆವ ಪರಮ ಸುಖವ ಪಡೆದ
ಎಲ್ಲರೊಡನೆ ಆವ ಮಡಿದ

ಆವಾ
ಅರಸನಾದ
ಗೆಳೆಯನಾದ
ಅನುಭಾವಿಯಾದ
ಆವಾ ಆವಿಯಾದ ...ನೀರಾದ.... ಮಳೆಯಾದ ..ಮಣ್ಣಾದ

ಈಗ ನಾ ಮಲಗುವುದು ಕನಸಿನಲ್ಲಿ ಮಾತ್ರ

ನನಗೊಂದು ಕನಸು ಬಿತ್ತು
ಅದರಲ್ಲಿ
ನಾ ಬಯಸಿದ
ಅರಮನೆ
ಕಾರು
ತೋಟ
ಕೆಲಸ
ಮೋಜು
ಮೇಜವಾನಿ
ನನ್ನ ಹೊಗಳುವ ಜನ

ಎಲ್ಲಾ ಇತ್ತು
ಎಲ್ಲಾ ಇತ್ತು
ಆದರೆ ನಾನಿರಲಿಲ್ಲ

ಕಂಡ ಕನಸಿನ ಹಿಂದೆ
ಓಡಿ ಓಡಿ ನಾ ಬಂದಿದ್ದೇನೆ ಕನಸಿಗಿಂತ ಮುಂದೆ

ಕನಸಲ್ಲೂ ಬದುಕಿನ ಹಾಗೆ ನಾನಿಲ್ಲ
ಛೇ ಕನಸೂ ಕಲುಷಿತಗೊಂಡಿದೆ
ಇಲ್ಲ
ಇಲ್ಲ
ಬಿದ್ದ ಕನಸಿನಲ್ಲಿ ನಾನಿರಲಿಲ್ಲ
ಏಕೆಂದರೆ ನಾ ಮಲಗಿರಲಿಲ್ಲ

ಈಗ ನಾ ಮಲಗುವುದು ಕನಸಿನಲ್ಲಿ ಮಾತ್ರ